Syndicate Bank
banner
 

ಆರ್ ಬಿ ಐ – ನಾಗರಿಕ ಸನ್ನದು

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಕರೆನ್ಸಿ ನಿರ್ವಹಣೆ ಇಲಾಖೆ

1 . ನಾಗರಿಕ ಸನ್ನದಿನ ಉದ್ದೇಶ

  • ಈ ನಾಗರಿಕ ಸನ್ನದು ನೋಟುಗಳು ಹಾಗೂ ನಾಣ್ಯಗಳ ವಿನಿಮಯ ಮತ್ತು ಆರ್ ಬಿ ಐ ವಿತರಣಾ ಕಚೇರಿಗಳು ಮತ್ತು ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ ಒದಗಿಸಲಾದ ಸೇವೆಗಳ ಸಾಮಾನ್ಯ ಮಾನದಂಡಗಳ ವಿಷಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಒದಗಿಸಿದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

2 . ಆರ್ ಬಿ ಐ ವಿತರಣಾ ಕಚೇರಿಗಳಲ್ಲಿ ಲಭ್ಯವಿರುವ ಸೇವೆಗಳು

  • ವಿತರಣಾ ಕಾರ್ಯ ನಿರ್ವಹಿಸುತ್ತಿರುವ ಆರ್ ಬಿ ಐ ಕಛೇರಿಗಳು, ಶಿಥಿಲವಾದ ಮತ್ತು ತುಂಡಾದ ನೋಟುಗಳು ಮತ್ತು ಹಳೆಯ, ಸವೆದ ಹಾಗೂ ಚಲಾವಣೆಯಲ್ಲಿಲ್ಲದ ಅಥವಾ ನಾಣ್ಯಗಳನ್ನು ವಿನಿಮಯ ಮಾಡಲು ಸಾರ್ವಜನಿಕರಿಗೆ ಸೌಲಭ್ಯವನ್ನು ನೀಡುತ್ತವೆ. ಕಚೇರಿಯ ಅವಧಿಯಲ್ಲಿ ಆರ್ ಬಿ ಐ ನ ಕೌಂಟರುಗಳಲ್ಲಿ ವಿನಿಮಯ ಸೌಲಭ್ಯವನ್ನು ಉಚಿತವಾಗಿ ನೀಡಲು ಬ್ಯಾಂಕ್ ಬದ್ಧವಾಗಿದೆ.

3. ವಿನಿಮಯ ಸೌಲಭ್ಯಗಳನ್ನು ಒದಗಿಸುವ ಆರ್ ಬಿ ಐ ಕಛೇರಿಗಳ ಹೆಸರುಗಳು

  • ಅಹಮದಾಬಾದ್, ಬೆಂಗಳೂರು, ಬೇಲಾಪುರ್ (ನವಿ ಮುಂಬಯಿ), ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಾತಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೊಲ್ಕತ್ತಾ, ಲಕ್ನೋ, ಮುಂಬೈ, ನಾಗಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂ ಈ ಸ್ಥಳಗಳ ಪ್ರಾಂತೀಯ ಕಛೇರಿಗಳ ಕೌಂಟರುಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

4. ನಾಣ್ಯ ವಿತರಕಗಳ (ಡಿಸ್ಪೆನ್ಸರ್) ಸಹಾಯದಿಂದ ನೋಟುಗಳನ್ನು ನಾಣ್ಯಗಳಾಗಿ ವಿನಿಮಯ ಮಾಡಿಕೊಳ್ಳಬಹುದು

  • ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಛೇರಿಗಳ ಬ್ಯಾಂಕಿಂಗ್ ಆವರಣಗಳಲ್ಲಿ ಸ್ಥಾಪಿಸಲಾದ ನಾಣ್ಯ ವಿತರಕಗಳನ್ನು ಬಳಸಿಕೊಂಡು ಸಾರ್ವಜನಿಕರು ತಮ್ಮ ನೋಟುಗಳನ್ನು ನಾಣ್ಯಗಳಿಗೆ ವಿನಿಮಯ ಮಾಡಿಕೊಳ್ಳಬಹುದು.

5. ಬ್ಯಾಂಕಿನ ಸಾರ್ವಜನಿಕ ಕೌಂಟರುಗಳಲ್ಲಿ ಶಿಥಿಲವಾದ ಹಾಗೂ ಸವೆದ ನೋಟುಗಳು ಮತ್ತು ನಾಣ್ಯಗಳ ವಿನಿಮಯ: ಸಾರ್ವಜನಿಕರು ಈ ಕೆಳಗಿನ ಸೌಲಭ್ಯಗಳನ್ನು ಬ್ಯಾಂಕಿನ ಕಛೇರಿಗಳ ಕೌಂಟರುಗಳಲ್ಲಿ ಪಡೆಯಬಹುದು.

  • ಎ) ಶಿಥಿಲವಾದ ನೋಟುಗಳ ವಿನಿಮಯ : ತುಂಡಾಗಿರುವ ಅಥವಾ ಅತಿ ಬಳಕೆಯ ಕಾರಣದಿಂದಾಗಿ ಹರಿದಿರುವ ಅಥವಾ ಎಣ್ಣೆ, ಬಣ್ಣ, ಮಸಿ ಇತ್ಯಾದಿಗಳಿಂದ ವಿರೂಪಗೊಂಡ ನೋಟುಗಳನ್ನು ಶಿಥಿಲಗೊಂಡ ನೋಟುಗಳೆಂದು ಪರಿಗಣಿಸಲಾಗುತ್ತದೆ. ಸುಲಭವಾಗಿ ವಿನಿಮಯ ಮಾಡಲು ಅನುಕೂಲವಾಗುವಂತೆ, ನೋಟಿನ ಸಂಖ್ಯೆ ಸರಿಯಾಗಿದ್ದು ನೋಟಿನ ಮಧ್ಯ ಭಾಗದಲ್ಲಿ ಹರಿದಿದ್ದರೆ ಅಂತಹ ನೋಟುಗಳನ್ನೂ ಶಿಥಿಲಗೊಂಡ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ರಾಜಕೀಯ ಅಥವಾ ಧಾರ್ಮಿಕ ಘೋಷಣೆಗಳನ್ನು ಬರೆದಿರುವ ನೋಟುಗಳನ್ನು ಯಾವುದೇ ಸಂದರ್ಭಗಳಲ್ಲಿ ವಿನಿಮಯ ಮಾಡಲಾಗುವುದಿಲ್ಲ.
  • ಬಿ) ತುಂಡಾದ ನೋಟುಗಳ ವಿನಿಮಯ : ತುಂಡಾದ ನೋಟಿನ ಒಂದು ಭಾಗ ಕಳೆದುಹೋಗಿದ್ದಲ್ಲಿ ಅಥವಾ ಹಲವಾರು ತುಣುಕುಗಳಾಗಿದ್ದಲ್ಲಿ ಅಥವಾ ವಿನಿಮಯಕ್ಕೆ ನೀಡಿದ ನೋಟು ಅರ್ಧಕ್ಕಿಂತ ಹೆಚ್ಚಾಗಿದ್ದರೆ ಹಾಗೂ ನೀಡಿದ ಪ್ರತಿ ತುಂಡು, 'ನಿಗದಿತ ಅಧಿಕಾರಿ' (ಆರ್ ಬಿ ಐ (ನೋಟು ಮರುಪಾವತಿ) ನಿಯಮಗಳಲ್ಲಿ ವಿವರಿಸಿರುವಂತೆ) ಅದೇ ನೋಟಿನ ಭಾಗವೆಂದು ಗುರುತಿಸಿದಲ್ಲಿ ಅಂತಹ ನೋಟನ್ನು ತುಂಡಾದ ನೋಟು ಎಂದು ಪರಿಗಣಿಸಲಾಗುವುದು. ಆರ್ ಬಿ ಐ (ನೋಟು ಮರುಪಾವತಿ) ನಿಯಮಗಳು, 1975 (1980 ರ ತನಕ ತಿದ್ದುಪಡಿಯಾಗಿ) ಆರ್ ಬಿ ಐ ಜಾಲತಾಣ http://www.rbi.org.in ನಲ್ಲಿ ತಲೆಬರಹ "ಪಬ್ಲಿಕೇಷನ್ಸ್" ಮತ್ತು ಉಪ-ತಲೆಬರಹ "ಅಕೇಶನಲ್ ಪಬ್ಲಿಕೇಷನ್ಸ್" ಅಡಿಯಲ್ಲಿ ಪ್ರಕಟಿಸಲಾಗಿದೆ.
  • ಸಿ) ಪ್ರಸ್ತುತ ಚಲಾವಣೆಯಲ್ಲಿಲ್ಲದ ನಾಣ್ಯಗಳನ್ನು ನೋಟು ಅಥವಾ ನಾಣ್ಯಗಳಾಗಿ ವಿನಿಮಯ ಮಾಡಬಹುದು.

6) ಮೂರು ಕೀಲಿಗಳುಳ್ಳ ಪೆಟ್ಟಿಗೆಯಲ್ಲಿ (ಟ್ರಿಪಲ್ ಲಾಕ್ ರೆಸೆಪ್ಟಾಕಲ್) ನೇರವಾಗಿ ಅಥವಾ ಅಂಚೆ ಮೂಲಕ ಸ್ವೀಕರಿಸಲಾದ ತುಂಡಾದ / ಹರಿದ ನೋಟುಗಳ ವಿನಿಮಯ.

  • ತುಂಡಾದ / ಹರಿದ ನೋಟುಗಳನ್ನು ಸಲ್ಲಿಸಿ ವಿನಿಮಯ ಮಾಡಲು ಬ್ಯಾಂಕಿನ ಕೌಂಟರುಗಳಲ್ಲಿ ಕಾಯಲಾಗದ ಸಾರ್ವಜನಿಕರಿಗೆ ವಿನಿಮಯ ಸೌಲಭ್ಯವನ್ನು ಒದಗಿಸುವ ಸಲುವಾಗಿ, ಬ್ಯಾಂಕಿನ ಕಚೇರಿಗಳು "ಟ್ರಿಪಲ್ ಲಾಕ್ ರೆಸೆಪ್ಟಾಕಲ್" (ಟಿಎಲ್ಆರ್) ಎಂಬ ಬೀಗ ಹಾಕಬಹುದಾದ ಪೆಟ್ಟಿಗೆಯಲ್ಲಿ ತುಂಡಾದ / ಹರಿದ ನೋಟುಗಳನ್ನು ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ಸೌಲಭ್ಯವನ್ನು ಒದಗಿಸುತ್ತದೆ. ಟಿಎಲ್ಆರ್ ಪೆಟ್ಟಿಗೆಯನ್ನು ನಿಗದಿತ ಕೌಂಟರ್ ಬಳಿ ಇರಿಸಲಾಗಿರುತ್ತದೆ, ಸಾರ್ವಜನಿಕರು ಮುಚ್ಚಿದ ಲಕೋಟೆಯಲ್ಲಿ ನೋಟುಗಳನ್ನು ಪೆಟ್ಟಿಗೆಯಲ್ಲಿ ಹಾಕಬಹುದು. ಈ ಲಕೋಟೆಯನ್ನು ವಿಚಾರಣಾ ಕೌಂಟರಿನಿಂದ ಪಡೆಯಬಹುದು. ನೋಟುಗಳನ್ನು ಸಲ್ಲಿಸುವವರು ತಾವು ಸಲ್ಲಿಸಿದ ನೋಟುಗಳ ವಿವರಗಳು, ಅವರ ಹೆಸರು, ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಬರೆಯಬೇಕು. ಸಾರ್ವಜನಿಕರು ವಿಮೆ ಮಾಡಿದ ಹಾಗೂ ನೋಂದಾಯಿತ ಅಂಚೆ (ರಿಜಿಸ್ಟರ್ಡ್ ಪೋಸ್ಟ್) ಮೂಲಕ ಕೂಡ ಆರ್ ಬಿ ಐ ಕಛೇರಿಗಳಿಗೆ ಶಿಥಿಲ ನೋಟುಗಳನ್ನು ಕಳುಹಿಸಬಹುದು. ಅಂತಹ ಲಕೋಟೆಗಳನ್ನು ನೋಂದಾಯಿತ ಮತ್ತು ವಿಮೆ ಮಾಡಿದ ಅಂಚೆ ಮೂಲಕ ಕಳುಹಿಸಬೇಕು. ವಿನಿಮಯಕ್ಕಾಗಿ ಸಲ್ಲಿಸಲಾದ ನೋಟುಗಳಿಗೆ ಬದಲಾಗಿ ಹಣ ಮರುಪಾವತಿ ಮಾಡಬೇಕಾಗಿದ್ದಲ್ಲಿ, ಪಾವತಿಸಬಹುದಾದಂತಹ ಮೌಲ್ಯವನ್ನು ಮರುಪಾವತಿ ನಿಯಮಗಳ ಅಡಿಯಲ್ಲಿ ಸಲ್ಲಿಸಿದವರ ಬ್ಯಾಂಕ್ ಖಾತೆಗೆ ಪ್ರಸ್ತುತ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸೇವೆ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಸಲ್ಲಿಸಿದವರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲವಾದರೆ ಅಥವಾ ಅವನು ವಾಸಿಸುವ ಸ್ಥಳದ ಹತ್ತಿರದಲ್ಲಿ ತೀರುವೆ ಸೇವೆ ಇಲ್ಲವಾದರೆ, ವಿನಿಮಯ ಮೌಲ್ಯವನ್ನು ಸಲ್ಲಿಸಿದವರ ವೆಚ್ಚದಲ್ಲಿ ಬ್ಯಾಂಕಿನ ಡ್ರಾಫ್ಟ್/ಮನಿ ಆರ್ಡರ್ ಮೂಲಕ ರವಾನೆ ಮಾಡಲಾಗುತ್ತದೆ. ಟಿಎಲ್ಆರ್ ಸೌಲಭ್ಯವು ಶಿಥಿಲ / ಹರಿದ ನೋಟುಗಳಿಗೆ ಮಾತ್ರ ಲಭ್ಯವಿದೆ ಮತ್ತು ಕೊಳೆಯಾದ ನೋಟುಗಳಿಗೆ ಇರುವುದಿಲ್ಲ.

7. ಈ ಸೇವೆಗಳಿಗೆ ಅನ್ವಯವಾಗುವ ಸಾಮಾನ್ಯ ನಿಬಂಧನೆಗಳು

  • ಬ್ಯಾಂಕಿನ ಕೌಂಟರುಗಳಲ್ಲಿ ವಿನಿಮಯ ಸೌಲಭ್ಯವು ಆಯಾ ಪ್ರಾದೇಶಿಕ ಕಚೇರಿಯ ವ್ಯವಹಾರದ ಅವಧಿಗಳಲ್ಲಿ ಲಭ್ಯವಿರುತ್ತದೆ ಮತ್ತು ಈ ಸೇವೆ ಉಚಿತವಾಗಿದೆ.
  • ಪ್ರತಿಯೊಂದು ಕಚೇರಿಯಲ್ಲಿ ವಿನಿಮಯ ಸೌಕರ್ಯ ದೊರೆಯುವ ಕೌಂಟರುಗಳ ಸಂಖ್ಯೆಗಳನ್ನು ಬ್ಯಾಂಕಿನ ಆವರಣದಲ್ಲಿ ಪ್ರದರ್ಶಿಸಲಾಗಿರುತ್ತದೆ.
  • ಮುಚ್ಚಿದ ಲಕೋಟೆಗಳಲ್ಲಿ ಶಿಥಿಲ / ಹರಿದ ನೋಟುಗಳನ್ನು ಕಚೇರಿಯ ವ್ಯವಹಾರದ ಅವಧಿಯ ನಂತರದ ಒಂದು ಗಂಟೆಯವರೆಗೆ ಟ್ರಿಪಲ್ ಲಾಕ್ ರೆಸೆಪ್ಟೆಕಲ್ (ಟಿ ಎಲ್ ಆರ್) ಗಳಲ್ಲಿ ಸ್ವೀಕರಿಸಲಾಗುತ್ತದೆ.
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ನೋಟು ಮರುಪಾವತಿ) ನಿಯಮಗಳ ಅಡಿಯಲ್ಲಿ ರಿಯಾಯತಿಯಾಗಿ ಹರಿದ ನೋಟುಗಳನ್ನು ಬ್ಯಾಂಕಿನಿಂದ ವಿನಿಮಯ ಮಾಡಲಾಗುತ್ತದೆ. ನಿಯಮಗಳ ಅನ್ವಯ ಶಿಥಿಲಗೊಂಡ / ಹರಿದ ನೋಟಿನ ವಿನಿಮಯ ತಿರಸ್ಕರಿಸಲಾಗಿದ್ದಲ್ಲಿ ಆ ಸಲಹೆಯನ್ನು ಸಲ್ಲಿಕೆದಾರರಿಗೆ ನೀಡಲಾಗುತ್ತದೆ. ನಿರಾಕರಿಸಿದ ನೋಟನ್ನು ಬ್ಯಾಂಕು ಸಂಗ್ರಹಿಸುತ್ತದೆ ಹಾಗೂ ನಾಲ್ಕು ತಿಂಗಳ ನಂತರ ನಾಶಮಾಡುತ್ತದೆ.
  • ಸಲ್ಲಿಸಿದ ನೋಟುಗಳು ನಾಣ್ಯಗಳು ನಕಲಿ ಎಂದು ಕಂಡುಬಂದಲ್ಲಿ ಬ್ಯಾಂಕು ಅವುಗಳನ್ನು ವಶಪಡಿಸಿಕೊಳ್ಳುತ್ತದೆ ಹಾಗೂ ಅವುಗಳ ವಿನಿಮಯದಲ್ಲಿ ಯಾವುದೇ ಮೌಲ್ಯವನ್ನು ಪಾವತಿಸಲಾಗುವುದಿಲ್ಲ. ಅಂತಹ ನೋಟುಗಳು / ನಾಣ್ಯಗಳ ಬಗ್ಗೆ ಸಲ್ಲಿಕೆದಾರರಿಗೆ ಸೂಚನೆ ನೀಡಿದ ನಂತರ ಬ್ಯಾಂಕು ಅವುಗಳನ್ನು ತನ್ನ ಬಳಿ ಉಳಿಸಿಕೊಳ್ಳುತ್ತದೆ.
  • ಆರ್ ಬಿ ಐ ನೀಡಿದ ಬ್ಯಾಂಕ್ ನೋಟುಗಳ ಭದ್ರತಾ ವೈಶಿಷ್ಠ್ಯಗಳನ್ನು ಬ್ಯಾಂಕಿನ ಜಾಲತಾಣ http://www.rbi.org.in/currency/banknotes.html ದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗಿದೆ.
  • ಯಾವುದೇ ಆರ್ ಬಿ ಐ ಕಛೇರಿಗಳಲ್ಲಿ ಮೇಲಿನ ವಿನಿಮಯ ಸೌಲಭ್ಯಗಳನ್ನು ಪಡೆಯುವಲ್ಲಿ ಸಾರ್ವಜನಿಕರು ಯಾವುದೇ ತೊಂದರೆ ಎದುರಿಸುತ್ತಿದ್ದರೆ ಅಥವಾ ಅದಕ್ಕಾಗಿ ಯಾವುದೇ ರೀತಿಯ ಲಂಚ ಕೇಳುತ್ತಿದ್ದರೆ, ಅವರು ಅದನ್ನು ಪ್ರಾದೇಶಿಕ ಕಚೇರಿಯ ವಿಚಾರಣೆ ಕೌಂಟರಿನಲ್ಲಿರುವ ದೂರು ಪುಸ್ತಕ / ರಿಜಿಸ್ಟರಿನಲ್ಲಿ ದೂರು ದಾಖಲಿಸಬಹುದು ಅಥವಾ ಅದನ್ನು ಆಯಾ ಆರ್ ಬಿ ಐ ಕಚೇರಿಯ ಇಲಾಖೆಯ ಉಸ್ತುವಾರಿ ಅಧಿಕಾರಿಯ ಗಮನಕ್ಕೆ ತರಬಹುದು.ಉಸ್ತುವಾರಿ ಅಧಿಕಾರಿಗಳ ಹೆಸರು ಮತ್ತು ವಿಳಾಸಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
  • ರಿಸರ್ವ್ ಬ್ಯಾಂಕಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಎಲ್ಲ ಸಾರ್ವಜನಿಕರ ಜೊತೆಗೆ ಸೌಜನ್ಯ ಹಾಗೂ ಪರಿಗಣನೆಯಿಂದ ವ್ಯವಹರಿಸುತ್ತಾರೆ. ಗ್ರಾಹಕರ ವಿಚಾರಣೆ ಮತ್ತು ದೂರುಗಳಿಗೆ ಸಿಬ್ಬಂದಿಗಳು ತಕ್ಷಣವೇ ಸ್ಪಂದಿಸುತ್ತಾರೆ ಹಾಗೂ ಸಹಾಯ ಮಾಡುತ್ತಾರೆ

8. ವಾಣಿಜ್ಯ ಬ್ಯಾಂಕುಗಳ ಕೌಂಟರುಗಳಲ್ಲಿ ಶಿಥಿಲವಾದ ಹಾಗೂ ತುಂಡಾದ ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಿಕೊಳ್ಳುವುದು.

  • ರಿಸರ್ವ್ ಬ್ಯಾಂಕ್ ಕಚೇರಿಗಳು ಆಯ್ದ ಕೇಂದ್ರಗಳಲ್ಲಿ ನೆಲೆಗೊಂಡಿವೆ. ಶಿಥಿಲವಾದ ನೋಟುಗಳ ವಿನಿಮಯ, ನೋಟುಗಳಿಂದ ನಾಣ್ಯಗಳಿಗೆ ಹಾಗೂ ನಾಣ್ಯಗಳಿಂದ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ನಿಗದಿತ ವಾಣಿಜ್ಯ ಬ್ಯಾಂಕುಗಳ ಶಾಖೆಗಳಲ್ಲಿ ಈ ಸೌಲಭ್ಯವನ್ನು ರಿಸರ್ವ್ ಬ್ಯಾಂಕು ವ್ಯವಸ್ಥೆ ಮಾಡಿದೆ. ಶಿಥಿಲಗೊಂಡ ನೋಟುಗಳನ್ನು ವಿನಿಮಯ ಮಾಡುವ ಸೌಲಭ್ಯವು ಸಾರ್ವಜನಿಕ ವಲಯದ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ಖಜಾನೆ ಶಾಖೆಗಳಲ್ಲಿ ಲಭ್ಯವಿವೆ, ಆದರೆ, ತುಂಡಾದ / ಹರಿದ ನೋಟುಗಳ ವಿನಿಮಯದ ಸೌಲಭ್ಯ ವಾಣಿಜ್ಯ ಬ್ಯಾಂಕುಗಳ ಖಜಾನೆ ಶಾಖೆಗಳಲ್ಲಿ ಮಾತ್ರ ಲಭ್ಯವಿದೆ. ತುಂಡಾದ ನೋಟುಗಳನ್ನು ವಿನಿಮಯ ಮಾಡಬಹುದಾದ ಖಜಾನೆ ಶಾಖೆಗಳ ಪಟ್ಟಿಯು ಆರ್ ಬಿ ಐ ಕಛೇರಿಗಳ ವಿಚಾರಣಾ ಕೌಂಟರಿನಲ್ಲಿ ಲಭ್ಯವಿದೆ. ಅಂತಹ ಖಜಾನೆ ಶಾಖೆಗಳೂ ಸಹ ತುಂಡಾದ ನೋಟುಗಳ ವಿನಿಮಯದ ಸೌಲಭ್ಯದ ಬಗ್ಗೆ ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಲು ಸೂಚನೆಗಳನ್ನು ಹೊಂದಿವೆ. ಅಂತಹ ಯಾವುದೇ ಶಾಖೆ ವಿನಿಮಯ ಸೌಲಭ್ಯವನ್ನು ಒದಗಿಸಲು ನಿರಾಕರಿಸಿದರೆ, ಈ ಬಗ್ಗೆ ಅಸಮಾಧಾನ ಹೊಂದಿದ ಸಾರ್ವಜನಿಕರು ವಾಣಿಜ್ಯ ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ / ಸಿಇಒ ಇವರಿಗೆ ದೂರು ನೀಡಬಹುದು. ದೂರುಗಳನ್ನು ಪರಿಹರಿಸಲಾಗದಿದ್ದಲ್ಲಿ, ಈ ವಿಷಯವನ್ನು ಭಾರತದ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಗಮನಕ್ಕೆ ತರಬಹುದು.
  • ಇತರ ಬ್ಯಾಂಕುಗಳ ಶಾಖೆಗಳು ಅಂದರೆ ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ತಮ್ಮ ಅನುಕೂಲತೆಯ ಮೇರೆಗೆ ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಬಹುದಾಗಿದೆ. ಆದರೆ, ಈ ಬ್ಯಾಂಕುಗಳು ತುಂಡಾದ ನೋಟುಗಳನ್ನು ವಿನಿಮಯ ಮಾಡುವ ಅಧಿಕಾರ ಹೊಂದಿರುವುದಿಲ್ಲ.

9. ಸಲಹೆಗಳು / ಟೀಕೆ ಟಿಪ್ಪಣಿಗಳು

  • ನಾಗರಿಕ ಸನ್ನದಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲಹೆ ನೀಡ ಬಯಸಿದಲ್ಲಿ, ಅವರು ಮುಖ್ಯ ಪ್ರಧಾನ ವ್ಯವಸ್ಥಾಪಕರು, ಕರೆನ್ಸಿ ನಿರ್ವಹಣಾ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಕಚೇರಿ, ಶಾಹಿದ್ ಭಗತ್ ಸಿಂಗ್ ಮಾರ್ಗ, ಮುಂಬೈ - 400 001 ಇವರಿಗೆ ಬರೆಯಬಹುದು.

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು